ಕಂದ2 : ಕನ್ನಡದಲ್ಲಿ ಪ್ರಕಟವಾಗುತ್ತಿದ್ದ ಮಕ್ಕಳ ಮಾಸಿಕೆ, ಮೈಸೂರು ನಗರದ ಜಯನಗರದಲ್ಲಿರುವ ಚಿಲ್ಡ್ರೆನ್ಸ್‌ ಬುಕ್ ಕೌನ್ಸಿಲ್ ಎಂಬ ಸಂಸ್ಥೆಯ ಆಶ್ರಯದಲ್ಲಿ 1947ರ ನವೆಂಬರ್ 27ರಂದು ಇದರ ಪ್ರಕಟನೆ ಆರಂಭವಾಯಿತು. ಎನ್. ನಾಗೇಶರಾವ್ ಸಂಪಾದಕರು. ಮಕ್ಕಳ ಆಸಕ್ತಿಯನ್ನು ಪ್ರಚೋದಿಸುವ, ಸೃಜನಾತ್ಮಕ ಶಕ್ತಿಯನ್ನು ಬೆಳೆಸುವ ಮತ್ತು ಅವರ ಮನಸ್ಸುಗಳನ್ನು ರಂಜಿಸುವ ಲೇಖನ ಕವಿತೆ ಕಥೆ ಚುಟಕಗಳೇ ಮುಂತಾದವನ್ನು ಅನುರೂಪ ಚಿತ್ರಗಳೊಂದಿಗೆ ಪ್ರಕಟಿಸುತ್ತ ಬಂದ ಈ ಪತ್ರಿಕೆ ಮೂರು ವರ್ಷಗಳ ಕಾಲ ನಡೆದು ನಿಂತಿತು. ಹೀಗೆ ಒಂದೊಂದು ಸಂಚಿಕೆಯಲ್ಲೂ ನಾನಾ ವಿಷಯಗಳನ್ನೊಳಗೊಂಡ ಪತ್ರಿಕಾರೂಪದ ಪ್ರಕಟನೆಯ ಬದಲು ಒಂದೊಂದು ಸಂಚಿಕೆಯನ್ನು ಒಂದೊಂದು ವಿಷಯಕ್ಕೆ ಮೀಸಲಾಗಿಟ್ಟು ಶಾಶ್ವತವಾದ ಮಕ್ಕಳ ಸಾಹಿತ್ಯಸೃಷ್ಟಿಯಲ್ಲಿ ಇದನ್ನು ತೊಡಗಿಸಬೇಕೆಂದು 1956ರ ನವೆಂಬರ್ನಲ್ಲಿ ನಡೆದ ಕೌನ್ಸಿಲಿನ ಸಭೆಯಲ್ಲಿ ಕೈಗೊಂಡ ತೀರ್ಮಾನಕ್ಕೆ ಅನುಗುಣವಾಗಿ ಇದನ್ನು 1957ರಲ್ಲಿ ಕಂದ ಕಾವ್ಯಮಾಲೆಯೆಂದು ಪರಿವರ್ತಿಸಲಾಯಿತು. ರಾಮಾಯಣ, ಮಹಾಭಾರತ ಮತ್ತು ಪೌರಸ್ತ್ಯ ಪಾಶ್ಚಾತ್ಯ ಕಥೆಗಳು, ಜೀವನ ಚರಿತ್ರೆಗಳು, ವಿಜ್ಞಾನ ವಿಚಾರ, ಚರಿತ್ರೆ, ಭೂವಿವರಣೆ, ಸಾಮಾನ್ಯಜ್ಞಾನ, ನಾಟಕಗಳು-ಇವೆಲ್ಲ ಈ ಮಾಲೆಯಲ್ಲಿ ಪ್ರಕಟವಾಗಿವೆ. ಇಂಥ ಸಂಚಿಕೆಗಳ ಒಟ್ಟು ಸಂಖ್ಯೆ 110, 1964ರಲ್ಲಿ ಈ ಪ್ರಕಟನೆಗಳೂ ನಿಂತು ಹೋದುವು.	(ಎನ್.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ